ಬೆರ್ಗಸ್, ಜೇಮ್ಸ್
1832-1916. ಪುರಾತತ್ವಶೋಧಕ, ಗಣಿತಶಾಸ್ತ್ರಜ್ಞ. ಹುಟ್ಟಿದ್ದು ಸ್ಕಾಟ್ಲೆಂಡಿನ ಕರ್ಕೆಮಹೋನಲ್ಲಿ 1832 ಆಗಸ್ಟ್ 14ರಂದು. ಇಪ್ಪತ್ತಮೂರನೆಯ ವಯಸ್ಸಿನಲ್ಲಿ (1855) ಭಾರತಕ್ಕೆ ಬಂದು ಕಲ್ಕತ್ತ ಮತ್ತು ಮುಂಬಯಿಗಳಲ್ಲಿ ಶೈಕ್ಷಣಿಕ ವಿಭಾಗದಲ್ಲಿ ಕೆಲಸಮಾಡಿದ. ಆ ತರುಣದಲ್ಲಿಯೇ ವಿಜಯವಾಡದ ಸುತ್ತಮುತ್ತಲಿನ ಅವಶಿಷ್ಟಗಳ ಹಾಗೂ ಅಮರಾವತಿ ಮತ್ತು ಜಗ್ಗಯಪೇಟದ ಸ್ತೂಪಗಳ ಸಮೀಕ್ಷೆ ನಡೆಸಿದ. ಕರ್ನಾಟಕದ ಧಾರವಾಡ ಜೆಲ್ಲೆಯಲ್ಲಿದ್ದ ಚಾಳುಕ್ಯ ದೇವಾಲಯಗಳನ್ನೂ ಪರೀಕ್ಷಿಸಿದ. ಈತನನ್ನು ಭಾರತದ ಪುರಾತತ್ವ ಸಂಶೋಧನಾ ವಿಭಾಗದ ಮಹಾನಿರ್ದೆಶಕನಾಗಿ 1855ರಲ್ಲಿ ನೇಮಿಸಲಾಯಿತು. 

	ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಮೀಕ್ಷಾ ಕಾರ್ಯಗಳನ್ನು ಸಮೀಕರಿಸಿದ್ದು ಇವನ ಕಾಲದ ಮಹತ್ಸಾಧನೆ. ಇದರಿಂದಾಗಿ ಸಮೀಕ್ಷೆ, ರಕ್ಷಣೆ ಹಾಗೂ ಸಂಶೋಧನೆ ಇವನ ಜವಾಬ್ದಾರಿಗೆ ಒಳಪಟ್ಟುವು. ಇವನ ಕಾಲದಲ್ಲಿ ಇಂಗ್ಲಿಷರ ಅಧಿಪತ್ಯಕ್ಕೆ ಒಳಪಟ್ಟ ಭಾರತದ ಭಾಗ ಮದ್ರಾಸು, ಮುಂಬಯಿ, ಪಂಜಾಬ್ (ಸಿಂಧ್ ಮತ್ತು ರಜಪುಟಾಣಗಳನ್ನು ಒಳಗೊಂಡಂತೆ) ವಾಯುವ್ಯ ಪ್ರಾಂತ್ಯಗಳು (ಈಗಿನ ಉತ್ತರ ಪ್ರದೇಶ) ಮತ್ತು ಬಂಗಾಳ (ಅಸ್ಸಾಮ್ ಸೇರಿದಂತೆ) ಐದು ವಲಯಗಳಾಗಿ ವಿಂಗಡಿಸಲ್ಪಟ್ಟಿತ್ತು. 

	ಈತ ಅಧಿಕಾರ ವಹಿಸಿಕೊಂಡ ಮೇಲೆ ವಾಸ್ತುಶಿಲ್ಪಗಳ ಪರಿಶೀಲನೆ ಮತ್ತು ನಕ್ಷೆಗಳ ತಯಾರಿಕೆಗೆ ಸಾಕಷ್ಟು ಕಾಲ ವಿನಿಯೋಗಿಸಿದ. ಇದರಿಂದ ಭೂಶೋಧನೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಲಿಲ್ಲ. ಮಥುರಾದ ಕಂಕಳಿತಿಲ ದಿಣ್ಣೆಯ ಅಗೆತವೊಂದೇ ಇವನ ಕಾಲದಲ್ಲಿ ನಡೆದ ಭೂಶೋಧನೆ. ಈ ಅಗೆತದಿಂದ ಶಾಸನಗಳುಳ್ಳ ಕೆಲವು ಶಿಲ್ಪಗಳು ಬೆಳಕಿಗೆ ಬಂದುವು. ಭೂಶೋಧನೆಯನ್ನು ಪ್ರಾಚ್ಯ ಸಂಶೋಧಕ ಸಮೀಕ್ಷೆಯವರು ಮಾತ್ರ ನಡೆಸಬೇಕೆಂದೂ ಅನ್ಯರು ಶೋಧಿಸುವುದು ನ್ಯಾಯಬಾಹಿರವೆಂದು ಘೋಷಿಸಬೇಕೆಂದೂ ಇವನು ಸರ್ಕಾರಕ್ಕೆ ಸೂಚಿಸಿದ. 

	ಇವನು ಎಫಿಗ್ರಾಫಿಯ ಇಂಡಿಕ ಎಂಬ ತ್ರೈಮಾಸಿಕ ಪ್ರಾರಂಭಿಸಿ ಅನೇಕ ಲೇಖನಗಳನ್ನು ತಾನೇ ಬರೆಯುವುದರ ಜೊತೆಗೆ ಶಾಸನಪಂಡಿತರಿಂದ ಕೂಡ ಶಾಸನಗಳ ಮೇಲೆ ಪಾಂಡಿತ್ಯಪೂರ್ಣ ಲೇಖನಗಳನ್ನು ಬರೆಸಿದ. ನಿವೃತ್ತನಾಗುವ ವೇಳೆಗೆ ಎಫಿಗ್ರಾಫಿಯ ಕರ್ನಾಟಕಾದ ಇಪ್ಪತ್ತು ಸಂಪುಟಗಳು ಸಿದ್ಧವಾದುವು. ಇದರ ಏಳು ಸಂಪುಟಗಳು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ನ್ಯೂ ಇಂಪಿರಿಯಲ್ ಸೀರಿಸಿನಲ್ಲೂ ಹನ್ನೆರಡು ದೊಡ್ಡ ಸಂಪುಟಗಳು ನ್ಯೂ ಇಂಪಿರಿಯಲ್ ಸೀರೀಸ್‍ನಲ್ಲೂ ಒಂದು ಎಪಿಗ್ರಾಫಿಯ ಇಂಡಿಕಾದಲ್ಲೂ ಸೇರಿದೆ. ಇವನ ಇತರ ಗ್ರಂಥಗಳಿವು: ದಿ ಏನ್ಸೆಂಟ್ ಟೆಂಪಲ್ಸ್ ಅಂಡ್ ಸ್ಕಲ್‍ಪ್‍ಟ್ಯೂರ್ ಆಫ್ ಇಂಡಿಯ, ಟೆಂಪಲ್ಸ್ ಆಫ್ ಶತ್ರಂಜಯ, ದಿ ರಾಕ್ ಟೆಂಪಲ್ಸ್ ಆಫ್ ಎಲಿಫೆಂಟ, ಸೀನರಿ ಅಂಡ್ ಅರ್ಕಿಟೆಕ್ಚರ್ ಇನ್ ಗುಜರಾತ್ ಬುಡ್ ರಾಜ್‍ಪುಟಾನ. 
										
	   (ಎಚ್.ವಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ